ಮರಸೌತೆ-
ಬಿಗ್ನೋನಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ(ಸಾಸಿಜ್ ಟ್ರೀ) ಆಫ್ರಿಕ ಇದರ ತವರು. ಸಸ್ಯ ವೈಜ್ಞಾನಿಕ ಹೆಸರು ಕೈಜೀಲಿಯ ಪಿನ್ನೇಟ. 

	ಇದು ಸುಮಾರು 15 ಮೀ ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದ ಮರ, ಮುಖ್ಯಕಾಂಡ ಅಷ್ಟು ಉದ್ದ ಇರುವುದಿಲ್ಲವಾದರೂ ರೆಂಬೆಕೊಂಬೆಗಳು ನೀಳ ವಾಗಿದ್ದು ಜೋಲು ಬಿದ್ದಿರುವುವು. ಮರದ ತೊಗಟೆ ಕಂದು ಮಿಶ್ರಿತ ಬೂದು; ಒರಟಾಗಿದೆ. ಎಲೆಗಳು ಸಂಯುಕ್ತ ಏಕಪಿಚ್ಛಕ ಮಾದರಿಯವು. ಒಂದೊಂದು ಎಲೆಯಲ್ಲೂ 7-9 ಅಂಡಾಕಾರ ಕಿರುಎಲೆಗಳಿವೆ. ಹೂಗಳು ಚಾಕಲೇಟ್ ಕೆಂಪು ಬಣ್ಣದವು; ತೂಗುಬಿದ್ದಿರುವ ಪ್ಯಾನಿಕಲ್ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳು ರಾತ್ರಿವೇಳೆ ಅರಳಿ, ಬೆಳಗಿನ ಹೊತ್ತು ಉದುರುವುವು. ಕಾಯಿಗಳು ಬಲುದೊಡ್ಡಗಾತ್ರದವು; ಒಂದೊಂದರ ಉದ್ದ ಸುಮಾರು 45 ಸೆಂ.ಮೀ, ವ್ಯಾಸ ಸುಮಾರು 12 ಸೆಂಮೀ. ಆಕಾರ ಸೌತೇಕಾಯಿಯಂತೆ. ಕಾಯಿ ಸಿಪ್ಪೆ ಬಲು ಮಂದ. ಒಳಗಿನ ತಿರುಳು ಮಾತ್ರ ಬಹಳ ಮೃದು ಒಳಗೆ ಗುಂಡನೆಯ ಅನೇಕ ಬೀಜಗಳಿವೆ.

	ಇದನ್ನು ಬೀಜಗಳಿಂದ ವೃದ್ಧಿಸಲಾಗುತ್ತದೆ. ಗೆಲ್ಲುಗಳಿಂದ ಕೂಡ ಬೆಳೆಸಬಹುದು. ಅಲಂಕಾರಕ್ಕಾಗಿ ಮಾತ್ರವಲ್ಲದೆ ಮರಸೌತೆ ನಾಟಿ ಔಷಧಿಕ್ರಮದಲ್ಲೂ ಪ್ರಸಿದ್ಧವಾಗಿದೆ.  ಕಾಯಿಯನ್ನು ಸುಟ್ಟು ವ್ರಣ ಸಿಫಿಲಿಸ್, ಸಂಧಿವಾತ ಚಿಕಿತ್ಸೆಗೆ ಬಳಸುವುದಿದೆ. ತೊಗಟೆ ಕೂಡ, ಸಂಧಿವಾತ, ಅತಿಸಾರ ನಿವಾರಣೆಯಲ್ಲಿ ಬಳಕೆಯಾಗುತ್ತದೆ. ಬರಗಾಲದಲ್ಲಿ ಬೀಜಗಳನ್ನು ಹುರಿದು ಆಹಾರವಾಗಿ ಸೇವಿಸುವುದುಂಟು. ಚೌಬೀನೆ ತೊಲೆಯಾಗಿ ಆಸರೆಕಂಬವಾಗಿ ಒದಗುತ್ತದೆ. ಆಫ್ರಿಕದ ಕೆಲವು ಕಡೆ ಇದನ್ನು ಪವಿತ್ರಭಾವನೆಯಿಂದ ಕಾಣಲಾಗುತ್ತದೆ. 
(ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ